ಭಾರತದ ಉಳಿವಿಗಾಗಿ ಭಾರತೀಯ ವಿದ್ಯೆ, ಕಲೆಗಳ ಪುನರುತ್ಥಾನಕ್ಕಾಗಿ ಭವ್ಯ ಭಾರತದ ಭಾವೀಪ್ರಜೆಗಳ ನಿರ್ಮಾಣಕ್ಕಾಗಿ ಶ್ರೀರಾಮಚಂದ್ರಾಪುರಮಠವು ಬಾಲಕಿಯರಿಗಾಗಿ ಆರಂಭಿಸುತ್ತಿರುವ ವಿಶಿಷ್ಟ ವಿದ್ಯಾಸಂಸ್ಥೆ ರಾಜರಾಜೇಶ್ವರೀ~ಗುರುಕುಲಮ್.
ವಿಷ್ಣುಗುಪ್ತ~ವಿಶ್ವವಿದ್ಯಾಪೀಠದಲ್ಲಿ ಲಭಿಸಲಿರುವ ಉಚ್ಚ ಶಿಕ್ಷಣದ ಪೀಠಿಕೆಯಾಗಿ ತತ್ಪೂರ್ವ ಶಿಕ್ಷಣ ನೀಡಲು, ಬಾಲಿಕೆಯರಿಗೆ ಸನಾತನ ಭಾರತೀಯ ಸಂಸ್ಕಾರದೊಡನೆ ಸಮಕಾಲೀನ ಪ್ರಾಥಮಿಕ, ಪ್ರೌಢ ಮತ್ತು ಪದವಿಪೂರ್ವ ಶಿಕ್ಷಣಗಳನ್ನು ಒದಗಿಸಲು , ಜಗದ ಏಕೈಕ ಆತ್ಮಲಿಂಗವಿರುವ ಸುಕ್ಷೇತ್ರ ಗೋಕರ್ಣದಲ್ಲಿ; ಆಂಜನೇಯನ ಅವತಾರಭೂಮಿಯ ಅತಿನಿಕಟದಲ್ಲಿ; ದೇಶದ ಆಶಾಕಿರಣವಾಗಿ ಉದಯಿಸುತ್ತಿರುವ ವಿದ್ಯಾದೇಗುಲ.
- ಭಾರತದಲ್ಲಿ ಆಧುನಿಕ ಶಿಕ್ಷಣವನ್ನು ಅತ್ಯುತ್ತಮವಾಗಿ ನೀಡುವ ಶಾಲೆಗಳಿವೆ.
- ವೇದ – ಶಾಸ್ತ್ರಗಳ ಅಧ್ಯಯನವನ್ನು ಉತ್ಕೃಷ್ಟವಾಗಿ ಮಾಡಿಸುವ ಪಾಠಶಾಲೆಗಳಿವೆ.
- ಆಧುನಿಕ ಶಿಕ್ಷಣದ ಜೊತೆ ಭಾರತೀಯ ಸಂಸ್ಕಾರವು ಮೇಳೈಸಿದ ಶ್ರೇಷ್ಠ ಶಿಕ್ಷಣ-ಸಂಸ್ಥೆಗಳೂ ಇವೆ.
- ಸಂಗೀತ, ನೃತ್ಯ, ಚಿತ್ರಕಲೆಗಳಲ್ಲಿ ಮಕ್ಕಳನ್ನು ಪರಿಣತರನ್ನಾಗಿಸುವ ಕೇಂದ್ರಗಳಿವೆ.
- ವಿವಿಧ ಕೌಶಲಗಳಲ್ಲಿ ವಿದ್ಯಾರ್ಥಿಗಳನ್ನು ಸಮರ್ಥರಾಗಿಸುವ ವ್ಯವಸ್ಥೆಗಳಿವೆ.
ಆದರೆ ಇವೆಲ್ಲವನ್ನೂ ಒಳಗೊಂಡ ಸಂಸ್ಥೆಯಿಲ್ಲ. ಇನ್ನೂ ಹೆಚ್ಚಿನದನ್ನು ನೀಡುವ ಸಂಸ್ಥೆಯು ಇಲ್ಲವೇ ಇಲ್ಲ. ಹಾಗಾಗಿಯೇ
ಶಾಲೆಗಳು ಸಾವಿರವಿದ್ದರೂ ‘ಸಾವಿರದ ಒಂದು’ ಬೇಕು. ಈ ಹಿನ್ನೆಲೆಯಲ್ಲಿ ಶ್ರೀರಾಮಚಂದ್ರಾಪುರಮಠವು ರೂಪಿಸುತ್ತಿರುವ ಅನುಪಮ ಸಂಸ್ಥೆ ರಾಜರಾಜೇಶ್ವರೀ~ಗುರುಕುಲಮ್.